ಭಾನುವಾರ, ಏಪ್ರಿಲ್ 22, 2012

ಜ್ಞಾನ-ಶೀಲ-ಏಕತೆ’ ಶಿಕ್ಷಣ ರಂಗದಲ್ಲಿ ಇದೇನ್ಕತೆ?!

ಜ್ಞಾನ-ಶೀಲ-ಏಕತೆ’ ಶಿಕ್ಷಣ ರಂಗದಲ್ಲಿ ಇದೇನ್ಕತೆ?! ಜ್ಞಾನ-ಶೀಲ-ಏಕತೆ ಎಂದು ದಶಕಗಳ ಕಾಲ ಕೂಗುತ್ತಿದ್ದ, ಕಿರುಚುತ್ತಿದ್ದ ಅ.ಭಾ.ವಿ.ಪ.ದ ವಿದ್ಯಾರ್ಥಿ ಮುಖಂಡರೇ ರಾಜ್ಯದಲ್ಲಿ ಇಂದು ಶಿಕ್ಷಣ ಮಂತ್ರಿಗಳಾಗಿದ್ದಾರೆ. ಹಿಂದೂ ರಾಷ್ಟ್ರ ನಿರ್ಮಾಣ ಗುರಿಯ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದೆ.ಭವ್ಯ ಸನಾತನ ಸಂಸ್ಕೃತಿಯ ರಕ್ಷಣೆಯ ಕಾರ್ಯಸಾಧನೆಗಾಗಿ ಇಲ್ಲಿ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಇತ್ಯಾದಿ ಇತ್ಯಾದಿ ಏನೇನೋ ತರುವ ಕಡೆಗೆ ಸರ್ಕಾರದ ಗಮನ ನೆಟ್ಟಿದೆ. ಇವೆಲ್ಲಾ ಒಂದು ಕಡೆ. ಆ ಕಡೆ ರಾಜ್ಯದ ಗುಲ್ಬರ್ಗಾ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ದಾಸ್ತುನು ಮಳಿಗೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಅಲ್ಲಿ ಸಿಕ್ಕಿದ್ದೇನು? ಈ ವರ್ಷ ಶಾಲಾ ಮಕ್ಕಳಿಗೆ ವಿತರಣೆ ಮಾಡದೇ ಹಾಗೆ ಸಂಗ್ರಹಿಸಿಟ್ಟಿದ್ದ ಶಾಲಾ ಪಠ್ಯ ಪುಸ್ತಕಗಳು. ಅದೂ ಎಷ್ಟು? ಬರೋಬ್ಬರಿ 30 ಸಾವಿರ ಪುಸ್ತಕಗಳು. ಬರೀ ಈ ವರ್ಷದಲ್ಲಿ ಮಾತ್ರವಲ್ಲ. ಈ ಹಿಂದಿನ ವರ್ಷಗಳ ಪಠ್ಯಪುಸ್ತಕಗಳೂ ದೊಡ್ಡ ಪ್ರಮಾಣದಲ್ಲಿ ಧೂಳು ತಿನ್ನುತ್ತಾ ಅಲ್ಲಿ ಬಿದ್ದಿವೆ. ಎಷ್ಟೋ ಪುಸ್ತಕಗಳಿಗೆ ಗೆದ್ದಲು ಹಿಡಿದು ಬಿಟ್ಟಿದೆ. ಹೊರಗೆ ನೋಡಿದರೆ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಸಿಗುತ್ತಿಲ್ಲ. ಶಿಕ್ಷಕರ ಪಾಠ ಪ್ರವಚನಕ್ಕೆ , ಮಕ್ಕಳ ಓದು-ಬರಹಕ್ಕೆ ತೀರಾ-ತೊಂದರೆಯಾಗಿದೆ. ಇನ್ನು ಯಾವ ಯಾವ ಜಿಲ್ಲೆಯಲ್ಲಿ `ಇನ್ನೂ ಏನೇನು ಪರಿಸ್ಥಿತಿ ಇದೆಯೋ ಜ್ಞಾನ-ಶೀಲ-ಏಕತೆ ಗಳಿಸಿ, ಸಾಧಿಸಿ, ರಾಜ್ಯದ ಸನ್ಮಾನ್ಯ ಮಂತ್ರಿ ಸ್ಥಾನಕ್ಕೇರಿರುವ ಸಚಿವಧ್ವಯರೇ ಹೇಳಬೇಕಾಗಿದೆ. `ಹೆಚ್ಚುವರಿ’ ವಿದ್ಯುತ್ ಕೊಡಲಾಗದು’ ಸುಮಾರು ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ದರ್ಬಾರ್ ಆರಂಭವಾದಾಗ ರಾಜ್ಯದ ವಿದ್ಯುತ್ ಪರಿಸ್ಥಿತಿ, ವಿದ್ಯುತ್ ಅಭಾವದ ಬಗೆಗೆ ಮುಖ್ಯಮಂತ್ರಿ ಡಾ:ಯಡಿಯೂರಪ್ಪ ಬಾರಿ ಹಾರಾಡುತ್ತಿದ್ದರು. ವಿದ್ಯುತ್ ಅಭಾವಕ್ಕೆ ಇಲ್ಲಿಯವರೆಗೆ ಆಳಿದ ಕಾಂಗ್ರೆಸ್, ಜನತಾದಳ ಮುಂತಾದ ಪಕ್ಷಗಳೇ ಹೊಣೆ ಎಂದು ದಾಳಿ ಮಾಡಿ, ತಮ್ಮ ಸರ್ಕಾರ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವುದೆಂದು ಘೋಷಿಸುತ್ತಿದ್ದರು. ಅದರಲ್ಲಿ ತಾತ್ಕಾಲಿಕ ವಿದ್ಯುತ್ ಖರೀದಿ ಯೋಜನೆಗಳಲ್ಲದೆ, ಛತ್ತೀಸ್ಗಢ ಮುಂತಾದೆಡೆ ರಾಜ್ಯಕ್ಕೆ ವಿದ್ಯುತ್ ಪೂರೈಸುವ ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆಯೂ ಇರುತ್ತಿತ್ತು. ಈಗ ಯಡಿಯೂರಪ್ಪ ಚೆನ್ನಾಗಿ `ಮಾಗಿದ್ದಾರೆ’! ರಾಜ್ಯದಲ್ಲಿ ನಗರ -ಗ್ರಾಮಾಂತರ ಎಲ್ಲ ಕಡೆ ತೀವ್ರ ಲೋಡ್ಶೆಡ್ಡಿಂಗ್. ಯಾವಾಗ ಕರೆಂಟು ಇರುತ್ತದೆ. ಯಾವಾಗ ಕರೆಂಟು ಹೋಗುತ್ತದೆ ಯಾರಿಗೂ ಗೊತ್ತಿಲ್ಲ ಎಂಬಂತಹ ಅರಾಜಕ ಸ್ಥಿತಿ. ಆದರೆ ಯಡಿಯೂರಪ್ಪ `ರಾಜ್ಯದ ಕೆಲವು ಜಲಾಶಯಗಳು ತುಂಬಿಲ್ಲ. ಜನರಿಗೆ ಹೆಚ್ಚುವರಿ ವಿದ್ಯುತ್ ಕೊಡಲು ಸಾಧ್ಯವಿಲ್ಲ’ ಅಂತ ತಣ್ಣಿಗೆ ಕೈ ಚೆಲ್ಲಿದ್ದಾರೆ. ಜನ ಕೇಳುತ್ತಿರುವುದು ಹೆಚ್ಚುವರಿ ವಿದ್ಯುತ್ತಲ್ಲ. ಈಗ ಕೊಡದೇ ಕಿತ್ತುಕೊಳ್ಳಲಾಗಿರುವ ವಿದ್ಯುತ್ ಅಂತ ಯಡಿಯೂರಪ್ಪನವರಿಗೆ ಯಾರು ಹೇಳುವುದು. ರಾಯಚೂರು, ಬಳ್ಳಾರಿಗಳಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ತಾಂತ್ರಿಕ ಸಮಸ್ಯೆ ಸಮಸ್ಯೆಯಿಂದಾಗಿ ಉತ್ಪಾದನೆ ಕುಸಿದಿದೆ. ಇದು ನಿನ್ನೆ ಮೊನ್ನೆ ಆದದ್ದಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಈ ತೊಂದರೆ ಕಾಣಿಸಿಕೊಳ್ಳುತ್ತಿದೆ. ಆದರೆ ರಾಜ್ಯ ಬಿಜೆಪಿ ಸಕರ್ಾರ ಸ್ಥಾವರಗಳ ದುರಸ್ಥಿಗೆ ಮತ್ತು ಸಮರ್ಪಕವಾದ ನಿರ್ವಹಣೆಗೆ ಗಮನ ನೀಡುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಮಾರುತಿ ಮಾನ್ಪಡೆಯವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತೂ ರಾಜ್ಯದಲ್ಲಿ ದುಡಿದು, ದಣಿದು ಬಂದ ಜನರು ರಾತ್ರಿ ತಮ್ಮ ಅನ್ನವನ್ನು (ಅದು ಇದ್ದರೆ) ಕತ್ತಲಲ್ಲೇ ಉಂಡು ಕತ್ತಲಲ್ಲೇ ಕೈತೊಳೆಯಬೇಕಾದ ಪರಿಸ್ಥಿತಿ. ಬಸ್ ಪಾಸ್ – ವಿದ್ಯಾರ್ಥಿ ಪಾಸ್ ದುಬಾರಿ ಬೆಂಗಳೂರಿನಲ್ಲಿ ದಿನವೊಂದಕ್ಕೆ 40 ಲಕ್ಷ ಜನ ಪ್ರಯಾಣಿಕರು ಬಿ.ಎಂ.ಟಿ.ಸಿ. ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ನಿಯಮಿತವಾಗಿ ನಿರಂತರವಾಗಿ ಬಸ್ನಲ್ಲಿ ಪ್ರಯಾಣ ಮಾಡುವವರು ತಿಂಗಳ ಪಾಸ್ ಮಾಡಿಸುತ್ತಾರೆ. ಹಾಗಿಲ್ಲದವರು ಹೆಚ್ಚು ಓಡಾಟ ಇರುವ ದಿನ ದಿನದ ಪಾಸನ್ನು ಕೊಂಡು ಓಡಾಡುತ್ತಾರೆ. ಕೇಂದ್ರ ಸರ್ಕಾರದ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಕೂಡಲೇ ರಾತ್ರೋರಾತ್ರಿ ಬಸ್ ಟಿಕೆಟ್ (ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯದು ಸೇರಿ) ಬೆಲೆಗಳು ಹಾಗೂ ವಿವಿಧ ಬಗೆಯ ಮಾಸಿನ-ದೈನಂದಿನ ಪಾಸುಗಳ ಬೆಲೆಗಳು ಏರಿಬಿಟ್ಟವು. ಈಗ ದಿನದ ಪಾಸುಕೊಂಡು ಓಡಾಡುವ ಪ್ರಯಾಣಿಕರು ಮತ್ತೊಂದು ಸುತ್ತಿನ ಆಘಾತ ಎದುರಿಸಬೇಕಾಗಿದೆ. ಇದೀಗ ಬಸ್ ಪಾಸ್ ಬೆಲೆ ರೂ.35ರೂ. ಇದ್ದದ್ದು ಮತ್ತೆ ದಿಢೀರನೆ 40 ರೂ.ಗೆ ಏರಿ ಬಿಟ್ಟಿದೆ. ರೂ.35ರೂ. ದಿನದ ಪಾಸುಗಳು ಸಿಗುತ್ತವೆ. ಆದರೆ ಅದಕ್ಕೆ ಪ್ರಯಾಣಿಕರು ಸಾರಿಗೆ ಸಂಸ್ಥೆಗೆ 100 ರೂಪಾಯಿ ತೆತ್ತು ಒಂದು ವರ್ಷದ ಅವಧಿಗೆ ಗುರುತಿನ ಚೀಟಿ ಮಾಡಿಸಬೇಕಂತೆ. ದರ ಏರಿಕೆಯ ಆಘಾತಕ್ಕೆ ಗುರಿಯಾದ ಜನರು ಅದರಲ್ಲೂ ಬಡಜನರು, ಸರ್ಕಾರದ ಹಾಗೂ ಸಾರಿಗೆ ಸಂಸ್ಥೆಯ ಧೋರಣೆ ವಿರುದ್ಧ ಸಿಟ್ಟು ವ್ಯಕ್ತಪಡಿಸಿ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿಯುವುದು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತಿದೆ. ಈ ಸಂದರ್ಭದಲ್ಲೆಲ್ಲಾ ಜನ ಹೇಳುವುದೇನೆಂದರೆ ನೆರೆಯ ತಮಿಳುನಾಡು, ಆಂಧ್ರ, ಕೇರಳ ಎಲ್ಲಿಗೆ ಹೋಲಿಸಿಕೊಂಡರೂ ಬೆಂಗಳೂರು ಮತ್ತು ರಾಜ್ಯದಲ್ಲಿ ಟಿಕೆಟ್ ದರಗಳು ಅತ್ಯಂತ ದುಬಾರಿ ಅಂತ. ಅದು ನಿಜವೇ. ಅದು ಹಾಗಿರಲೇ ಬೇಕು. ಏಕೆಂದರೆ ದಕ್ಷಿಣ ರಾಜ್ಯದಲ್ಲೆಲ್ಲಾ ಕರ್ನಾಟಕದಲ್ಲೇ ತಾನೆ ಬಿಜೆಪಿ ದರ್ಬಾರ್ ಇರುವುದು. ವಿದ್ಯಾರ್ಥಿಗಳನ್ನು ಬಿಟ್ಟಿರಲಿಲ್ಲ ಪ್ರಯಾಣ ದರ ಏರಿಕೆ ವಿದ್ಯಾರ್ಥಿಗಳನ್ನು ಕೂಡ ಬಿಟ್ಟಿರಲಿಲ್ಲ. ಈ ವರ್ಷ ಕಾಲೇಜು ವಿದ್ಯಾರ್ಥಿಗಳಿಗೆ 200 ರೂಪಾಯಿಗಳಷ್ಟು ಬಸ್ಪಾಸ್ ದರವನ್ನು ಏರಿಸಲಾಗಿತ್ತು. ವಿದ್ಯಾರ್ಥಿಗಳು ರಾಜ್ಯವ್ಯಾಪಿಯಾಗಿ ಪ್ರತಿಭಟನೆ ನಡೆಸಿದ ಮೇಲೆ ಸರ್ಕಾರ ವಿದ್ಯಾರ್ಥಿಗಳ ಪಾಸ್ ದರ ಏರಿಕೆ ವಾಪಸ್ ಪಡೆದಿದೆ. ಬಿಜೆಪಿ ದರ್ಬಾರ್ಗೆ ವಿದ್ಯಾರ್ಥಿಗಳಿಂದಲೂ ಛೀಮಾರಿ. ಡೆಂಗ್ಯೂಗೆ `ಪರಿಹಾರ ಘೋಷಣೆ ವೀರ ಸರ್ಕಾರ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಮೊನ್ನೆ ಡೆಂಗ್ಯೂ ಖಾಯಿಲೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಘೋಷಿಸಿದರು. ಇದರ ಅರ್ಥವೇನು? ಡೆಂಗ್ಯೂ ಪೀಡಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಆ ವೆಚ್ಚವನ್ನು ಸರ್ಕಾರ ಭರಿಸುವುದು ಅಂತ. ಈ ಘೋಷಣೆಯ ಹಿಂದೆಯೇ ಸರ್ಕಾರದ ಆಡಳಿತ ಯಂತ್ರದ ಹಿರಿಯ ಅಧಿಕಾರಿಗಳಿಂದಲೇ ಅಪಸ್ವರ ಹೊರಟಿತು. ಇದು ಕಾರ್ಯಸಾಧ್ಯ ಅಲ್ಲ ಅಂತ. ಯಡಿಯೂರಪ್ಪ ಸರ್ಕಾರ ಹಿಂದೆ ಹೆಚ್1 ಎನ್1 ಕಾಯಿಲೆ ಬಗೆಗೆ ಕೂಡ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಘೋಷಿಸಿತ್ತು. ಆದರೆ ಒಂದು ವರ್ಷ ಕಳೆದರೂ ಯಾರಿಗೂ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಕೊಟ್ಟೇ ಇಲ್ಲವಂತೆ. ಖಾಸಗಿ ಆಸ್ಪತ್ರೆಗಳಿಂದ ಮನವಿಗಳೂ ಹೆಚ್ಚಿನ ಕಡೆಯಿಂದ ಬಂದಿಲ್ಲವಂತೆ. ಯಾಕೆ ಹೇಗೆ. ಹೆಚ್1.ಎನ್1 ರೋಗಿಗೆ ಒಬ್ಬರಿಗೆ ಈ ಸಕರ್ಾರ ನೀಡುವುದಾಗಿ ಹೇಳಿದ್ದು 2000 ರೂಪಾಯಿ. ಅದಕ್ಕೆ ನೂರೆಂಟು ಕೊಕ್ಕೆ, ತಕರಾರು ಪ್ರಕ್ರಿಯೆಗಳು. ಇಷ್ಟಾದ ಮೇಲೂ ಅದು ಹಣ ಕೈಗೆ ದಕ್ಕುತ್ತದೆ ಎಂಬ ಖಾತರಿ ಏನಿಲ್ಲ. 2 ಸಾವಿರ ರೂಪಾಯಿ ಪಡೆದುಕೊಳ್ಳಲು ಒಂದೂವರೆ ಸಾವಿರ, ಒಂದೂ ಮುಕ್ಕಾಲು ಸಾವಿರ ಖರ್ಚು ಮಾಡಬೇಕಾಗಿ ಬಂದರೆ ಯಾರು ತಾನೇ ಅರ್ಜಿ ಹಾಕುತ್ತಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಘೋಷಣೆವೀರ ಸರ್ಕಾರ ಅಂತ ಏನಾದರೂ ಒಂದು ಬಿರುದು ಕೊಡಬಹುದೇನೋ? ಅಂದ ಹಾಗೆ ಡೆಂಗ್ಯೂ ಪೀಡಿತರಿಗೆ ಸರ್ಕಾರ ತಲಾ ರೋಗಿಗೆ ಎಷ್ಟು ಹಣ ನೀಡುತ್ತದೆ ಎಂಬುದನ್ನು ನಿರ್ಧಿಷ್ಟವಾಗಿ ಹೇಳಿಲ್ಲ. ಯಾರಿಗೆ ತಾನೆ ನಂಬಿಕೆ ಬರುತ್ತದೆ ಸರ್ಕಾರದ ಬಗ್ಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ